Web presence by infouna
Manasumanasuma

BACK

ಬಹಳ ದಿನಗಳಾದುವು

By Dr. Vijaya Nayak on 02nd January 2015

ಬಹಳ ದಿನಗಳಾದುವು
ಹವಳದೆನ್ನ ತುಟಿಗಳಿಗೆ ನೀ
ತಲುಪಿಸಿ ತಿಳಿನಗು
ಬಹಳ ದಿನಗಳಾದುವು
ಬಾಳ ಪಥದಲ್ಲಿ ಸಾಫಲ್ಯದ
ಸೌರಭ ಹೊತ್ತ ಮೆಲು
ಗಾಳಿಯಲೆಗಳನು ನೀ
ಕಳುಹಿಸಿ ಬಹಳ ದಿನಗಳಾದುವು
ಬಲು ಚೈತನ್ಯದಿ
ಕಳವಳಿಸದಿರೆಂದು
ಸರಳ ಸುಲಲಿತ
ಪದಗಳಲಿ ಅರಿವ
ಬೆಳಕನೆನ್ನೆದೆಯಲ್ಲಿ ನೀ ಚೆಲ್ಲಿ
ಬಹಳದಿನಗಳೇ ಆದುವು..

ಕುಲುಕುಲುನಗುತ ವನಮಾಲಿ,
ಬೆಳಕೇ ನೀನಾಗಿ ಈಗಲಾದರೂ,
ಒಲಿದು ಬಾ ಮತ್ತೊಮ್ಮೆ!
ಬರಲಿದೆ ಇನ್ನರೆಗಳಿಗೆಯೊಳಗೆ,
ಅರಳಲಿದೆ ನೋಡು,
ಸುರುಳಿ ಸುರುಳಿ ಯಾಗಿ
ಹೊಚ್ಚ ಹೊಸವರುಷ !!
ಆಲಿಸುತ್ತಿದ್ದಿಯಾ ಮುರಳಿ ಲೋಲ
ವಿಳಂಬಿಸದಿರು ಯೆನ್ನುತ್ತಿದ್ದಂತೆಯೇ
ಭಲ! ಭಲ!!ನೆಲ, ಮನೆ, ಮನವೆಲ್ಲ
ಬೆಳಕಾಯಿತಲ್ಲ.. ’ಧನ್ಯೋಸ್ಮಿ’
ಧನ್ಯೋಸ್ಮಿ ಯೆನ್ನಬೇಕೆಂದಿದ್ದೆ,
ಕಂಗಳರಳಿದವೇ ವಿನಃ
ಉಲಿಯಲ್ಲಿಲ್ಲ ಮೌನ,
ತಲೆ ಬಾಗಿತೇವಿನಃ
ಕಳೆದುಕೊಳ್ಳಲಿಲ್ಲ ನಾ
ನಿನ್ನ ದರುಶನದೀ ಅತಿ ಭವ್ಯ ಕ್ಷಣ
ಕೃಷ್ಣ.. ಕೃಷ್ಣ, ಕೃಷ್ಣ ಕೃಷ್ಣ..

ಕೇಳಿದಲ್ಲಿ ಮಾತ್ರವೇ ಯಾರಾದರೂ
ಮೆಲುದನಿಯಲ್ಲೇ ಆಗಲಿ, ತಪ್ಪದೇ
ತಿಳಿಸಿಯೇನು, ಮಾತ್ರ ವೇ
ನಂಬಿಕೆಯ ತೆಪ್ಪದಲ್ಲಿ ನಾ
ತೇಲುತಿದ್ದೆ ಬಹಳದಿನಗಳಿಂದಲೂ,
ಉಳಿಸಿಕೊಂಡೆ ನಿನ್ನ ಮಾತನು,
ಈ ಇಳೆಯೊಳಗೆ ನಾನಿರುವಾಗಲೇ
ಬಾಳಿಗಿತ್ತುಸಾಫಲ್ಯ, ಸಾಕ್ಷಾತ್ಕಾರದ
ಹೊಳಪನ್ನು.., ಸುಳ್ಳಲ್ಲ, ಆಯಾಸದ
ಸುಳಿವಿಲ್ಲ ! ಹೇಳು ನಿನ್ನಪ್ರೀತಿಗೆಲ್ಲಿ ಎಣೆ?
ಅಳೆಯಲಾಗದ ಸಂಪತ್ತು ಶ್ರೀ ಕೃಷ್ಣ, ಮೈ, ಮನ
ಪುಳಕಿತಗೊಳಿಸುವ ಈ ನಿನ್ನ ನಾಮಸ್ಮರಣೆ!

-ಡಾ. ವಿಜಯಾ ನಾಯಕ್
ತಾ. ೩೧ ೧೨. ೨೦೧೪ ವೇಳೆ: ರಾ.೧೧೪೩