Web presence by infouna
Manasumanasuma

BACK

ಅಭ್ಯುದಯ ಗಣಪತಿ

By Dr. Vijaya Nayak on 01st August 2014

ಅಭ್ಯುದಯ ಗಣಪತಿ
ವಾಯುಜಲಾನಲಾನಿಲನೆಲನಭವೆಲ್ಲ ಗಣಪತಿ
ನೀಲ,ಕೆಂಪು,ಹಸಿರುಹಳದಿಯಲ್ಲಿ ಹೊಳೆವ ಗಣಪತಿ
ಆಳಎತ್ತರ,ಎಷ್ಟು ಮಹತ್ತರ ಎಂದರಿಯಲಾಗದ ಮಹಾ ಗಣಪತಿ!
ಬಳಲಿದಾಗ "ಏಳು ಬೆಳಗೆಂದು"ಒಲವಿನಲಿ
ತಿಳಿಸಿದ ಭವ್ಯ ಗಣಪತಿ, ಬದುಕಿನ ಸಾರವೇ ಗಣಪತಿ
ಆಧ್ಯಾತ್ಮದಲ್ಲಿ ನೆಲೆಸಿದ್ದ ಜ್ಞಾನಾರ್ಕ ಗಣಪತಿ
ನಾದ ನಿನಾದ ವೇದ ವಾದ್ಯಗಳಲ್ಲಿಕೇಂದ್ರೀಕೃತಗೊಂಡ
ಧ್ಯಾನ ಬಿಂದು, ಪ್ರಣವ ಗಣಪತಿ-ನೀನೇ ಪ್ರವರ್ಧಮಾನ ಗಣಪತಿ.
ಅಂತರಂಗದತುಮುಲ ತರಂಗಗಳಿಗೆ ನೀನು ಸಾಂತ್ವನ ಗಣಪತಿ
ಅಂತರ್ಗತನಾಗದಿರು! ಹೊಂದಿಕೊಂಡಿರೆಂತಾದರೂ, ನೀನೆನ್ನ ಸಂಭ್ರಮ ಗಣಪತಿ
ಮಮಕಾರದ ಬಂಧ, ಓಂಕಾರದ ಸ್ವಚ್ಛಂದ, ದೈನಂದಿನ ಆನಂದ ಗಣಪತಿ
ಮಸ್ತಿಷ್ಕ ಮಾಣಿಕ್ಯ ಗಣಪತಿ, ಮೃದುಹೃದಯಿ ಪ್ರೀತಿ ದ್ಯೋತಕ ಮಿತ್ರ ಗಣಪತಿ
ಪವಿತ್ರ ಗಣಪತಿ ಸರಳ ಸುಂದರ ಸತ್ಯ ಗಣಪತಿ- ನೀತಿ ನಿಯಮಗಳ ಒಳ ಮರ್ಮ ಗಣಪತಿ
ತಿಳುವಳಿಕೆ ಗಣಪತಿ- ಮತ್ತೆಎಣಿಕೆ ಗಳಿಕೆಗಳ ಎಳೆ ಎಳೆಗೆ ಏಕಮಾತ್ರ ಅಧಿಪತಿ-ಇಹಪರದ
ಒಳಿತಿಗಾಗಿ ಗಣಪತಿ- ಪ್ರಕೃತಿ ಗಣಪತಿ, ಪ್ರಗತಿ ಗಣಪತಿ ಹೃತ್ಪ್ರಕಾಶ ಗಣಪತಿ
ಹೃತ್ಪೂರ್ವಕ ಹರಸಿ ಬರೆಸಿದ ಅಪೂರ್ವ ಗಣಪತಿ-
ಅಧ್ಭುತ ಗಣಪತಿ, ಅಮೂಲ್ಯ ಗಣಪತಿ ಅಪರಿಮಿತನು ನೀನೇ ಗಣಪತಿ
ಖಗಮಿಗ ಉರಗಗಳ, ಬಳ್ಳಿ ಗಿಡ ಮರಗಳ ಸಂಸ್ಥಾಪಕ, ಸಂಚಾಲಕ ಸಂರಕ್ಷಕ ಗಣಪತಿ
ಮತ್ತೆ ಗಳಿಗೆಗನುಸಾರಎಲ್ಲವನ್ನು, ಎಲ್ಲರನ್ನು ಹರಸಿ, ಹರಿಸಿ ಧರೆಯನ್ನುಧ್ಧರಿಸುವ
ಮಹಾಕರ್ತವ್ಯ ಶೀಲ, ಮಹಾಕರುಣಾಮಯಿ, ಮಹಾಓಜಃ ತೇಜಃ ನೇ ಗಣಪತಿ!
ವಿಶಾಲ, ವೈವಿದ್ಯಶೀಲ,ವಿಜಯ ಗಣಪತಿ- ಸ್ಮೃತಿ ಸಂಸ್ಕೃತಿಯ, ಸಾಹಿತ್ಯ ಸಂಹಿತೆಯ
ಸೂಕ್ಷ್ಮ ತಿಳಿಸಿದ ಮೇಧಾವಿ ಗಣಪತಿ- ಆಯಾಸ ಪರಿಹರಿಸಿದ ಚೇತಕ, ಚೇತನ ಗಣಪತಿ
ನೂತನ ವಿನೂತನದಲೆಗಳನ್ನೂ ಸನಾತನ ಧರ್ಮದ ಏಕತಂತು, ಏಕಾಗ್ರತೆ, ಏಕೈಕ್ಯತೆ
ಮತ್ತೆ ಅನೇಕತೆಯೊಳಗಿನೇಕತೆ ಯ ಪ್ರತೀಕವೆಂದು ಭೋದಿಸುವ ಅಪ್ರಮೇಯ ಗಣಪತಿ
ಅಶಾಂತತೆ ಯನ್ನೇ ಶಾಂತಿ ಸೂಕ್ತದ ಮಧ್ಯಬಿಂದು ವನ್ನಾಗಿ ಪರಿವರ್ತಿಸುವ ಮಾಯಾಮಯಿ,
ತನ್ಮಯಿ, ಸರ್ವಾಂತರ್ಯಾಮಿ ಅತಿಸಮರ್ಥ ಗಣಪತಿ ನೀನಾಗಿದ್ದರೂ,
ಮೋದಕ ಪ್ರಿಯ ಮುದ್ದು ಬಾಲಕ ಗಣಪತಿ, ಮುಗ್ಧತೆ ಗೆ ಸ್ಪಂದಿಸುತ್ತಾ ಲೋಕಕಲ್ಯಾಣದಲ್ಲಿ
ಪ್ರವೃತ್ತ ನಾದ ಪರಮಪೂಜ್ಯ ಗಣಪತಿ ಯೂ ನೀನೆಂದು ಶಿರಬಾಗಿ ಜನ ನಮಿಸಲಿ ಮಿಂದು
ನಂಬಿಕೆಯ ಜಾಹ್ನವಿ ಯಲ್ಲಿ!ಅಲ್ಲಿ,ಇಲ್ಲಿ ಎಲ್ಲೆಲ್ಲೂ ಇರುವ ನೀನು ಬಾಲ (ಬಾಲೆಯ)ನ ಬಳಪಕ್ಕೆ ಪುಷ್ಟಿ
ಕೊಟ್ಟು ಉತ್ಸಾಹಿಸುವ ವಿದ್ಯಾಗಣಪತಿ,
ಅಧ್ಯಾಪಕ ಗಣಪತಿ, ಅಂತಃ ಪ್ರೇರೇಪಣೆ ಗಣಪತಿ-ವಿಶ್ವಾಸ ಕ್ಕಾಗಿ ಮತ್ತು ವಿಶ್ವಾಸದಿಂದ ಮಾತ್ರವೇ
ಪಡೆಯಬಲ್ಲವಿಶ್ವ ವಿಖ್ಯಾತ ಪಾರಿತೋಷಕವೇ ನಿನ್ನ ಪ್ರಸನ್ನತೆ ಗಣಪತಿ,
ನೀನೇ ಸರ್ವಸಂಪನ್ನ ಪ್ರಸನ್ನ ಗಣಪತಿ-ಅನುಪಮೇಯನು ನೀನು, ಹನಿ ಹನಿ ಮಳೆ ಯಲ್ಲೂ, ತುಷಾರ ಬಿಂದು ವಿನಲ್ಲಿ, ಮತ್ತೆ ಸಾಗರ, ಮಹಾಪೂರ ದಲ್ಲಿ ನೆಲೆಸಿ
ವೈಶಾಲ್ಯ ಸೂಕ್ಷ್ಮ್ಯತೆಯ ತಾರತಮ್ಯ ಸರಿಸಿ
ಅರಿತವರಿಗೆ, ಅರಿಯಲಿರುವವರಿಗೆ ಪಾರಮಾರ್ಥಿಕತೆ ಯ ಮಹಾದ್ವಾರ ತೆರೆದು ಕೊಡುವ ಶಕ್ತಿಶಾಲಿ ಗಣಪತಿ
ಸಕಲಗುಣಾರ್ಣವ ಗಣಪತಿ-ಸಕಲಕಲಾಸಂಭೂತ ಗಣಪತಿ ಸಕಲೈಶ್ವರ್ಯ ಪ್ರದಾಯಕ ಗಣಪತಿ
ನಿನ್ನೆ ಯ ನೆನಪು, ಇವತ್ತಿನ ಕಂಪು, ನಾಳಿನನಿರೀಕ್ಷೆಯ ಹುರುಪು, ಉತ್ತಮೋತ್ತಮ ಬಾಳಿನ ಕೊನೆಯಲ್ಲಿ
ತಪ್ಪುಗಳನ್ನು ಕ್ಷಮಿಸಿ ನೀನೀಡುವ ತಂಪು, ಎಲ್ಲವೂ ನಿನಗೇ ಅರ್ಪಿತ, ನೀನೇ ಸಂಪ್ರೀತ ಗಣಪತಿ..
ನಿತ್ಯ ಸಂಪ್ರೀತಗಣಪತಿ- ಶುಭ ಸಂಕೇತ ಗಣಪತಿ- ಸಂಕಲ್ಪ ಪೂರೈಸಿ ಜೀವನವನ್ನು ಪಾವಕ ಪಾವನಗೊಳಿಸುವ
ಪ್ರಬುಧ್ಧ ಗಣಪತಿ.ಉಧ್ಭವ ಗಣಪತಿ-ಸಧ್ಭಾವ ಪ್ರೇರಕ ಗಣಪತಿ- ಜ್ಞಾನ ಪ್ರಜ್ಝ್ವಲ ಗಣಪತಿ,ಬುಧ್ಧಿಪ್ರಚುರ ಚತುರ ಗಣಪತಿ-ಲಕ್ಷಣೋಜ್ಝ್ವಲ ಗಣಪತಿ- ಸಹನಾಶೀಲ ಗಣಪತಿ
ಹೂವಿನೊಂದಿಗೆ
ನಾರೂ ಪೂಜ್ಯ ವೆಂದಾಗ ಜನರು,ನಾರಿನಾಂತರ್ಯಕ್ಕೆ ನೋವಾಗದಂತೆ
"ನನ್ನೊಡನೆ ಇದ್ದಾಗ ಯಾರೂ ಪೂಜ್ಯರು"' ಹೂವು ಬೇರಲ್ಲ ನಾರು ಬೇರಲ್ಲ ನೀವೂ ಬೇರಲ್ಲ ನಾನೂ ಬೇರಲ್ಲ'
ಎಂದು ಸಂತೈಸಿ
ಭಾವೈಕ್ಯತೆ ಮೂಡಿಸಿದ ಅತ್ತ್ಯಾಧುನಿಕ ಭಾವಾತ್ಮ ಗಣಪತಿ,ಪುಣ್ಯ ಪಾವನ ಗಣಪತಿ-
ದೇವಮಾನವ, ಮಾನವ ದೇವರಾಗಿ, ಜನರ ಜೀವನದಲ್ಲಿ ಪಾಲ್ಗೊಂಡು ಅವರೊಡಲಿನಲ್ಲಿ
ಭಕ್ತಿ, ಧನ್ಯತೆಯನ್ನರಳಿಸುವ ಪರಮಾರಾಧ್ಯ ಗಣಪತಿ- ನೀನೇ ಸಿಧ್ಧಿ ಗಣಪತಿ!
ಉಚ್ಛ್ವಾಸ ನಿಚ್ಛ್ವಾಸ ಗಣಪತಿ-ನಾಡಿನಡೆನುಡಿಯಲ್ಲಿ ನೆಲಸಿ ನಾಳಿನ ಉಜ್ಝ್ವಲತೆ ಯೆಡೆಗೆ ನಡೆಸುವ ನಿತ್ಯ ನೂತನ ಗಣಪತಿ-
ಹಿಂದಕ್ಕಲ್ಲದೆ ಮುಂದೆಮಾತ್ರವೇ ಸರಿಯುತ್ತಾಬಂದಿರುವಾಗ ಕಾಲ,
ಸರ್ವಜ್ಞ, ಸರ್ವಶಕ್ತ ಸರ್ವವ್ಯಾಪಿ ಯಾದ ಸರ್ವಕರ್ತೃ ವನ್ನುಭೂತ,ವರ್ತಮಾನ, ಭವಿಷ್ಯದ ದೃಷ್ಟಿಯಲ್ಲಿಯೂ ಅರಿಯಿರಿಯೆಂಬ ಜ್ಞಾನ ಕಿರಣಗಳನ್ನು ಜಗಕ್ಕೆಲ್ಲ ತಲುಪಿಸುವ ಸ್ವಪ್ರಕಾಶನೇ ಗಣಪತಿ
ನಿನ್ನೆ ಇಂದು ನಾಳೆಯ ಮಳೆ, ಬಿಸಿಲು, ಮಂಜು, ಮರಳು,ಮೆಲುಗಾಳಿ, ಬಿರುಗಾಳಿಯಲಿ ವಿಲೀನವಾಗಿರುವ ಲೀಲಾಮಯಿ ಗಣಪತಿ, ಪಂಚಭೂತಗಳಿಗೆ ಆಕಾರ, ಬಣ್ಣವಿತ್ತು ಮತ್ತೆ ಉಸಿರ ಸಿರಿ ಇತ್ತು, ಸಜೀವಗೊಳಿಸುವ ವಿಸ್ಮಯ ಕಲಾಕಾರ ಗಣಪತಿ, ಸೃಷ್ಟಿ-ದೃಷ್ಟಿ- ಅಂತ್ಯ ವಿಲ್ಲದ ಸಂಮೃಧ್ಧಿವೃಷ್ಟಿ ಎಲ್ಲಾ ನೀನೇ ಗಣಪತಿ
ಆಕಾರ, ನಿರಾಕಾರ ಸಾಕಾರ ಗಣಪತಿ, ಸೂಕ್ಷ್ಮ್ಯಾತಿಸೂಕ್ಷ್ಮ ಗಣಪತಿ- ವಿಶ್ವವ್ಯಾಪಕ ಗಣಪತಿ. ಬೇಗೆಯ ಉರಿಯಲೆ ತಲುಪುವ ಮೊದಲೇ ಮಿಂಚಿನ ವೇಗದಲಿ ಬಂದು ಸಂತಸವನ್ನು ಸಿಂಪಡಿಸುವ ಅನನ್ಯ ದಯಾಸಿಂಧು, ಆತ್ಮಬಂಧು ಗಣಪತಿ
ವಂದನೀಯರು ನಿನ್ನನ್ನು ನೆನೆದವರು, ದೇವರು ಯಾರೆಂದು ಅರಿತವರು!
ಅರಿಯಲಿರುವವರಿಗೆ ನಿನ್ನ ರಕ್ಷೆ ಇರಲಿ, ಗಣಪತಿ, ಸರ್ವಜ್ಞ ನೀನು, ಅರಿಯಲೆಳಸದವರು ಯಾರೂಇರಲಾರರು
ಎಂಬ ಆತ್ಮವಿಶ್ವಾಸದ ಸಂದೇಶ ವನ್ನು ವಿಶ್ವಕ್ಕೇ ಸಾರುವ ಹರ್ಷಪ್ರದಾಯಕ, ಅದ್ವಿತೀಯ ಗಣಪತಿ- ಆದರ್ಶ ಗಣಪತಿ- ಆಧ್ಯಾತ್ಮಿಕ ಕ್ರೀಡಾಂಗಣದ ಪ್ರವರ ವೀರ ಗಣಪತಿ- ನೀನೇ ಸೌಮ್ಯ ಗಣಪತಿ- ಕರ್ಮಣಿಯಿಂದ ಕರ್ತವ್ಯ ಚ್ಯುತಿಯಾಗದಂತೆ ಜತನದಲಿ ಕಾಯುವ ಸದ್ಗುಣ ಶೀಲ, ಶ್ರೀಘ್ರ ಮತಿ ಗಣಪತಿ!
ತಾಂತ್ರಿಕ, ವಿಜ್ಞಾನ ಲೋಕದ, ಅವಲೋಕನಕ್ಕೇ ನಿಲುಕದ, ಕ್ಲಿಷ್ಟ ತಂತು ಜಾಲ ಖಗೋಳವನ್ನೆಲ್ಲ ಹರಡಿ ಈ ಪೃಥ್ವಿಯನ್ನು ಪುಟ್ಟದೊಂದು ಆಡುಬುಗುರಿಯನ್ನಾಗಿಸುವ ಪ್ರಯತ್ನದಲ್ಲಿದ್ದಾಗ, ತನ್ನ ಜನಿವಾರದೆಳೆಯಿಂದಲೇ,ನಂಬಿಕೆ, ಶೃಧ್ಧೆಯ, ಅದೃಶ್ಯ ತಂತುವಿನಿಂದಲೇ ವಿಶ್ವ ದಾದ್ಯಂತ ತನ್ನ ಪರಿಚಯ,ಪ್ರಭಾವದ ಸಂಯುಕ್ತತೆಯ ಜತಗೆ ಮನಮೋಹಕತೆಯನ್ನೂ ಲೀಲಾಜಾಲವಾಗಿ ಹರಡುವ ವಿದ್ವಾಂಸ, ವಿದ್ದ್ಮಹಿ ಗಣಪತಿ!!
ನೀನೇ ನಿನ್ನೆ, ಇಂದು ನಾಳೆಯ ಭವಿಷ್ಯವನ್ನು ರಚಿಸಿ ಆಳುವ ಪ್ರಶಾಂತ ಪ್ರಜಾಧಿಪತಿ ಗಣಪತಿ
ಭಾವನೆಯ ಯಮುನೆ ಕಾವೇರಿ ಆರುವಮುನ್ನ, ಜನರೇ' ರೊಬೊ' ಆಗಿ ಭಾವರಹಿತ ಶುಷ್ಕ' ರೊಬೊ' ಗಳೇ ಧರಿತ್ರಿ ಯನ್ನಾಳುವ ಮೊದಲೇ, ಈ ನವಕಲ್ಪದಲ್ಲೂ ಮಾನವೀಯತೆಗೆ ಆಧಾರ ಭೂತನಾಗಿ ನಿಂತು ಶೃಧ್ಧಾಭಕ್ತಿ ವಿಶ್ವಾಸದ ದುಂಧುಭಿ ಯನ್ನೆಲ್ಲೆಡೆ ಮೊಳಗಿಸುವ ಅಭೂತಪೂರ್ವ ಆವಿಷ್ಕಾರಿ, ಆರಕ್ಷಕ, ಆವಿರ್ಭಾವಿ ವಿಶ್ವರಕ್ಷಕ ಗಣಪತಿ
ನೀನೇ ಪರಮಾಣು ಪರಮಾಯುಧವಿಜೃಂಭಿತ, ನೀನೇ ನಿರಾಯುಧತೆಯ ಕಲ್ಪನಾರಹಿತ ಬಲೈಶ್ವರ್ಯದ ಏಕಮಾತ್ರ ಚಕ್ರವರ್ತಿ,ಜನಕೋಟಿಯ ಪ್ರೀತಿ ಗಣಪತಿ!
ವೃತ್ತಿಯಲ್ಲಿ ಕೀರ್ತಿಯಾಗಿ, ನಿವೃತ್ತಿಯಲ್ಲಿವಿಶ್ರಾಂತಿಯಾಗಿ ಮತ್ತೆಆರೋಗ್ಯ ನೇಮಗಳನು ಪಾಲಿಸಲು ಸಹಕರಿಸಿ ಮರೆವಿನ ಕ್ರೂರತೆಗೆ ಬಲಿಯಾಗದಿದ್ದಂತೆ ಸು ಸ್ಮೃತಿ ಯ ವರದಾನ ವಿತ್ತು ವೃಧ್ದರನ್ನು ಗೌರವಿಸುವ ಹೃದಯಶ್ರೀಮಂತ ಕಾರುಣ್ಯಾನ್ವಿತ ಪ್ರತ್ಯಕ್ಷ ಗಣಪತಿ
ನೋಡಬಯಸುವವರಿಗೆ ಹರಡಿದ ಬೆಳ್ಮೋಡಗಳಿಂದಲೂ ಮೂಡಿ ಬಂದು ದರುಶನ ನೀಡಿ, ಪರಮ ವೈಯುಕ್ತಿಕ, ಶುಭ ಸಂದೇಶಗಳನ್ನಿತ್ತು ಹರಸುವ ದಿವ್ಯ ಗಣಪತಿ!
ಕಡಲಿಗಿಳಿದಾಗ ಬೈಗಿನಿನ, ಬಂದು ಗೂಡು ಸೇರಿದ ಹಕ್ಕಿಗಳುಲುವಿನಲಿ ಆಲಿಸಿದಳದೋ ಆ ಯುವತಿ
ಎಡೆಬಿಡದೆ," ಗಣಪತಿ.. ಗಣಪತಿ"!!
ಪಚೇಂದ್ರಿಯದಿನಿದನಿ ಗಣಪತಿ- ತಿಥಿ, ವಾರ, ಘಳಿಗೆ ಕರಣಗಳಂಕಣಗಳಲಿ ಗೋಚರಿಸಿ ಅನುದಿನದ ದಿನಚರಿ, ಮತ್ತೆ ಬಾಳಿನ ಗುರಿಯ ಬಗ್ಗೆ ಎಚ್ಚರಿಸುವ ವಿಚಾರಾತ್ಮಕ, ವಿಚಾರತತ್ಪರ ಗಣಪತಿ
" ಅಂಧಕಾರದಲ್ಲಿರಬೇಡ" ವೆಂದು ಜ್ಞಾನ ದೀವಿಗೆಯ ಪ್ರಪ್ರಥಮ ಬೆಳಕಿನೆಡೆಗೆ ಗಮನಹರಿಸುವಂತೆ
ಮಾಡುವ ಅಪ್ರತಿಮ ಚಮತ್ಕಾರಿ ಗಣಪತಿ-
ಇನ್ನು, ನಿನ್ನೊಳಗೇ ನೀನಡಗಿ ಗಡಗಡನಡುಗಿ ಉತ್ತರವಿಲ್ಲದ ನಿಬಿಡಪ್ರಶ್ನೆ ಗಳ ಬೆಂಗಾಡಿನಲಿ ಅಂಡಲೆದು ಮತ್ತೆ ಜಡಚೇತನನಾಗಿ, ಅಸುವಡಗಲಿಕ್ಕೆಇನ್ನುಹೊತ್ತಿಲ್ಲ ಎನ್ನುವುದರೊಳಗೆ ಒಂದು ಬಾರಿ,
ಕಣ್ಣಿನ ಮುಂದೆ ಹರಡಿದ ಹೊಗೆ, ಧೂಳು, ಪೊರೆ ಸರಿಸಿ ನೋಡು, ಇದೇ ಪೃಥ್ವಿಯ ಸಹಜೀವಿ,
ಕೈ ಚಾಚಿ ಸಹಾಯಕ್ಕೆಂದೇ ನಿಂತಿಹನು ಪರಮ ಕೃಪಾನಿಧಿ, ಅತಿ ದೇದಿಪ್ಯಮಾನ ಗಣಪತಿ!
ನನ್ನೊಡಲಲ್ಲಿ ವಿರಾಜಿಸಿ, ಭಕ್ತಿ ಯೇನೆಂದು ಭೋದಿಸಿ ಈ ಸೂಕ್ತಿಯ ಪ್ರತೀಯೊಂದು ಅಕ್ಷರ ಗಳಲ್ಲಿ ವ್ಯಕ್ತ ಗೊಂಡ ವಿಜಯವಿಧಾತ್ರಿ , ಸಮಸ್ತಲೋಕವಂದ್ಯ ಗಣಪತಿ -
ನಿನ್ನನ್ನೂ ಮತ್ತೆಲ್ಲರನ್ನೂ ಕೈ ಬಿಡದೇ ಎಂದೆಂದಿಗೂ ಪೊರೆವ ಸಾಮರ್ಥ್ಯವುಳ್ಳ ಸಕಲಾಧಿಷ್ಠಾನ ಸಕಲಭಾಗ್ಯಾಂಕಿತನವನು, ಅವನೇ ಅಷ್ಟದಿಕ್ಕುಗಳನ್ನೂ, ದಿಕ್ಕು ಕಾಣದೆ ಪರಿತಪಿಸುವವರೆಲ್ಲರನ್ನೂ ಕಾಪಾಡುವ ನಿಷ್ಟಾವಂತ ವಿಶ್ವಾಧಿಪತಿ, ಪರಮಪೂಜ್ಯ ಗಣಪತಿ.
ನೀನೊಮ್ಮೆ ಸ್ಮರಿಸಿನೋಡು! ಓಡಿಬಂದು ಆಧರಿಸಿ, ಆದ ಆಘಾತವನ್ನು ಅತಿ ವೇಗದಿ ವಾಸಿಮಾಡಿಯಾನು, ಶುಷ್ರೂಶನಿಗಿಂತ ಮಿಗಿಲಾದ ವೈದ್ಯ ಶಿಖಾಮಣಿ ಭಕ್ತರಕಣ್ಮಣಿ, ವಿಶ್ವ ಸನಾತನ ಜ್ಞಾನ ಭಾಸ್ಕರ, ಅರಸಿ ಬಂದವರಿಗೆ ಎಂದೂ "ಇಲ್ಲ" ವೆನ್ನದ ದಯಾಪರ ಗಣಪತಿ!
ಮುಂಜಾನೆ, ಮುಂಬೆಳಕು ಮಂಗಳಾರತಿಯ ಅಮೃತ ಗಳಿಗೆ ಎಲ್ಲಾ ನೀನೇ ಜ್ಯೋತಿರ್ಮಯಿ ಗಣಪತಿ-
'ತಪ್ಪಮನ್ನಿಸಿ ಹರಸು' ಎಂದೆತ್ತುವೆ ನಿನಗಾಗಿಯೇ ಇದೋ ಕೃತಜ್ಞತೆ ಯ ಕರ್ಪೂರದಾರತಿ..
ಆತ್ಮಬಂಧು, ಇದು ಪ್ರಾರಂಭ,ಅಂತ್ಯವಿಲ್ಲದ ನಿರಂತರ ನಾಮಸುರುಳಿಗಳಿಂದ ಅಲಂಕೃತ ವಾದ' ಬಕುತಿ ರೇಷ್ಮೆಯ',ನಿನ್ನವರದ ಹಸ್ತದಿಂದ ಸಂಪನ್ನಗೊಂಡ, ಪವಿತ್ರತಯೇ ತಾನಾದ ಈ ಶಾಲನ್ನು ಮುಂದೆ ಬರುವ ಪ್ರತಿಭಾನ್ವಿತರು ತಮ್ಮ ಅರ್ಪಣೆ ಗಳಿಂದ ಇನ್ನೂ ಪಾವನಗೊಳಿಸುತ್ತಿರಲಿ,
ಧನ್ಯೋಸ್ಮಿ.. ಧನ್ಯೋಸ್ಮಿ ಗಣಪತಿ-

ಗಂ ಗಂ ಗಣಪತಿ ಇದೆಂತಹ ನಂಟು ಏನಂತಿ! ಅಂತೆಯೇ ಬರಸಿದೆಯಲ್ಲಾ,ಹದಿನೆಂಟು ಘಂಟೆಗಳಲ್ಲಿ ನುಡಿ ಸಾವಿರದೆಂಟು!! ಅವಿರತ ಧ್ಯಾನಿಸಲ್ಪಡುವ ಅಭಿನವ ಗಣಪತಿ, ಸಂಪೂರ್ಣ ಜ್ಞಾನಾಭಾ, ನಿನ್ನಾಜ್ಞೆಯಂತೆ ವಿಶ್ವಶಾಂತಿಗಾಗಿ, ಜಗತ್ ಕಲ್ಯಾಣ ಕ್ಕಾಗಿ ಬರೆದ ಈ ನಾಮಸುರುಳಿಯ ಅಪೂರ್ವ ಸೌಗಂಧ ಹಾಗೂ ತಿಳಿಯುತ್ತಿದ್ದಂತೇ ಅನುಭವಕ್ಕೆ ಬರುವ ಈ ಬೆಳಕು ಇಳೆಯಲ್ಲಿ ಪ್ರದೀಪವಾಗಿ ಸದಾನೆಲೆಸಿರಲಿ, ನಿನ್ನ ಅಧ್ಭುತ ಶಕ್ತಿಯ ಏವಂ ಅಳೆಯಲಾಗದ ನಿನ್ನ ಕಾರುಣ್ಯದ ಮಹಾಸಂಕೇತ ವಾಗಿ.
ಸಮರ್ಪಿತವು ಇದೆಲ್ಲವು ಮಾತ್ರವೇ ನಿನಗಾಗಿ, ಜತೆಯಲ್ಲಿ ಈ ನನ್ನ ಪ್ರೀತಿ! ಜಯಜಯ ಅಮರ ಸತ್ಯಗಣಪತಿ
ಡಾ. ವಿಜಯಾ ನಾಯಕ್ ೨ .೭.೨೦೧೪